ಕಮರಾಕ್ಷಿ : ಆಕ್ಸಾಲಿಡೇಸೀ ಕುಟುಂಬಕ್ಕೆ ಸೇರಿದ ಅವರೋಹ ಎಂಬ ಜಾತಿಯ ನಿತ್ಯಹರಿದ್ವರ್ಣದ ಮರ. 15'-20' ಎತ್ತರಕ್ಕೆ ಬೆಳೆಯುವ ಈ ಮರವನ್ನು ಮೊದಲು ಪೋರ್ಚುಗೀಸರು ಅಮೆರಿಕದಿಂದ ಭಾರತಕ್ಕೆ ತಂದರೆಂದು ಹೇಳುವರು. ಈಗ ಇದನ್ನು ಭಾರತದಲ್ಲಿ ತೋಟಗಳಲ್ಲೂ ಉದ್ಯಾನಗಳಲ್ಲೂ ಬೆಳೆಸಲಾಗುತ್ತದೆ.

ಇದರಲ್ಲಿ ಅವರೋಹ ಕರಂಬೋಲ ಮತ್ತು ಅವರೋಹ ಬಿಲಿಂಬಿ ಎಂಬ 2 ಪ್ರಭೇದಗಳಿವೆ. ಮೊದಲನೆಯದರಲ್ಲಿ ಫಲ ಚಿಕ್ಕದಾಗಿದ್ದು ಸಿಹಿಯಾಗಿದೆ.  ಇನ್ನೊಂದರಲ್ಲಿ ಫಲ ದೊಡ್ಡದೂ ಒರಟೂ ಅತಿ ಹುಳಿಯೂ ಆಗಿದೆ. ಸಾಮಾನ್ಯವಾಗಿ ಎರಡು ಬಗೆಯವೂ ವರ್ಷಕ್ಕೆ 2 ಸಲ ಫಲ ಬಿಡುತ್ತವೆ-ಬೇಸಿಗೆಯಲ್ಲಿ ಒಮ್ಮೆ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಒಮ್ಮೆ; ಗರಿ ರೂಪದ ಎಲೆಗಳು ಸ್ವಲ್ಪಮಟ್ಟಿಗೆ ಸ್ಪರ್ಶಕ್ಕೆ ಶೀಘ್ರವೇದಿಯಾಗಿರುತ್ತವೆ.

ಅವರೋಹ ಎಂಬ ಪದ ಅವಿರೋಯಿಜ್ ಎಂಬ ಅರೇಬಿಯದ ವೈದ್ಯನ ಹೆಸರಿನಿಂದ ಬಂದಿದೆ. ಏಷ್ಯದ ಉಷ್ಣವಲಯ ಪ್ರದೇಶಗಳಲ್ಲಿ ದೀರ್ಘಕಾಲದಿಂದಲೂ ಹಣ್ಣಿಗಾಗಿ ಇದರ ವ್ಯವಸಾಯ ಸಾಗಿ ಬಂದಿದೆ. ಸಾಮಾನ್ಯವಾಗಿ ಇದನ್ನು ಬೀಜಗಳಿಂದಲೇ ವೃದ್ಧಿಗೊಳಿಸುವುದು ಹೆಚ್ಚು. ಆದರೆ ಉತ್ತಮ ತಳಿಗಳನ್ನು ಬಡಿಂಗ್ ಅಥವಾ ಗೂಟಿ ವಿಧಾನದಿಂದ ಪಡೆಯಬಹುದು.

ಇದರ ಎಲೆ, ಬೇರು ಮತ್ತು ಫಲಗಳಿಗೆ ಸ್ಕರ್ವಿ ರೋಗ ನಿವಾರಕ ಗುಣವಿರುವುದರಿಂದ ಔಷಧಿಯಾಗಿಯೂ ದೇಹವನ್ನು ತಂಪುಗೊಳಿಸುವುದಕ್ಕೂ ಬಳಸಲಾಗುತ್ತದೆ. ಫಲಗಳನ್ನು ಜೆಲ್ಲಿ, ಉಪ್ಪಿನಕಾಯಿ ಮುಂತಾದುವನ್ನು ತಯಾರಿಸಲು ಬಳಸುತ್ತಾರೆ. ಅದರಿಂದ ಉತ್ತಮ ಪೇಯವನ್ನೂ ತಯಾರಿಸುತ್ತಾರೆ. ಅಪಕ್ವ ಫಲಗಳು ಒಗರು, ಅವನ್ನು ಬಟ್ಟೆಗಳಿಗೆ ಬಣ್ಣ ಹಾಕುವುದಕ್ಕೂ ಲಿನೆನ್ ಅರಿವೆಗಳ ಮೇಲಿನ ತುಕ್ಕಿನ ಕಲೆಗಳನ್ನು ಅಳಿಸುವುದಕ್ಕೂ ಒಂದು ಆಮ್ಲ ವಸ್ತುವಿನ ರೂಪದಲ್ಲಿ ಬಳಸುವುದುಂಟು. ಅಲ್ಲದೆ ಹಿತ್ತಾಳೆ ಪಾತ್ರೆಗಳಿಗೆ ಹೊಳಪು ಕೊಡುವುದಕ್ಕೂ ಬಳಸುತ್ತಾರೆ. ಕಚ್ಚಾ ಫಲಗಳನ್ನು ಬೇಯಿಸಿ ತರಕಾರಿಯಂತೆಯೂ ಉಪಯೋಗಿಸುವುದುಂಟು. ಈ ಮರದ ಕಟ್ಟಿಗೆಗಳನ್ನು ಬಂಗಾಳದಲ್ಲಿ ಕಟ್ಟಡಗಳಿಗೂ  ಪೀಠೋಪಕರಣಗಳಿಗೂ ಬಳಸುವರು.

ಇದರ ಎಲೆಗಳು ಸಂಯುಕ್ತ ಮಾದರಿಯವು ಒಂದೊಂದು ಎಲೆಯೂ ಸು. 20-30 ಸೆಂ.ಮೀ. ಉದ್ದವಿದೆ. ಅದರಲ್ಲಿ ಒಂದು ನೀಳವಾದ ನಡುನಾಳ (ರೇಕೀಸ್), ಅದರ ಮೇಲೆ ಪರ್ಯಾಯವಾಗಿ ಜೋಡಣೆಗೊಂಡ 6-12 ಕಿರು ಎಲೆಗಳು ಇವೆ. ಕಿರುಎಲೆಗಳ ತುದಿ ಉದ್ದ ಮತ್ತು ಮೊನಚು ಬುಡ ದುಂಡು ಅಥವಾ ಓರೆಯಾಗಿದೆ. ಹೂಗೊಂಚಲುಗಳು ಎಲೆಗಳ ಕಂಕುಳಲ್ಲೊ ಇಲ್ಲವೆ ಮರದ ತೊಗಟೆಯ ಮೇಲೊ ಹುಟ್ಟುತ್ತವೆ. ಹೂಗಳು ಬಹಳ ಚಿಕ್ಕವು. ಪುಷ್ಪಪತ್ರ ಮತ್ತು ದಳಗಳು ಐದೈದು ಇವೆ, ಫಲ 7-12 ಸೆಂ.ಮೀ. ಉದ್ದವಿದ್ದು ಆಯತಾಕಾರವಾಗಿದೆ. ಅದರಲ್ಲಿ 5-6 ಚೂಪಾದ ಏಣುಗಳಿವೆ. ಮಾಗಿದಾಗ ಹಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ.

ಅವರೋಹ ಬಿಲಿಂಬಿ ಪ್ರಭೇದ 5-20 ಸೆಂ.ಮೀ. ಎತ್ತರ ಬೆಳೆಯುತ್ತದೆ. ಎಲೆಗಳೆಲ್ಲ ಕೊಂಬೆಗಳ ತುದಿಯಲ್ಲೇ ಹೆಚ್ಚು ದಟ್ಟವಾಗಿರುತ್ತವೆ. ನಿತ್ಯಹರಿದ್ವರ್ಣದ ಇದರ ಎಲೆಗಳು ಸಂಯುಕ್ತಪತ್ರಗಳಾಗಿದ್ದು ಉದ್ದ ಇವೆ. ಕಿರು ಎಲೆಗಳ ಸಂಖ್ಯೆ 11-35. ಅವು ನೀಳವಾದ ನಡುನಾಳದ ಮೇಲೆ ಅಭಿಮುಖವಾಗಿ ಜೋಡಣೆಗೊಂಡಿದ್ದು ತುದಿಯಲ್ಲಿ ಒಂದೇ ಕಿರು ಎಲೆ ಇದೆ. ಕಿರುಎಲೆಗಳು ಆಯತಾಕಾರದವು. ಅವುಗಳ ತುದಿ ಚೂಪಾಗಿಯೋ ಉದ್ದವಾಗಿಯೋ ಇದೆ. ಹೂಗೊಂಚಲು ದಪ್ಪ ಕಾಂಡ ಮತ್ತು ಕೊಂಬೆಗಳಿಂದ, ಚಿಕ್ಕ ಹಾಗೂ ಮೃದುರೋಮಗಳಿಂದ ಆವೃತವಾದ ಮಿಶ್ರಮಂಜರಿಯಾಗಿ ಹುಟ್ಟುತ್ತವೆ. ಪುಷ್ಪಪತ್ರ-5; ಪುಷ್ಪದಳ-5; ಕೇಸರಗಳು-5. ಎಲ್ಲ ಕೇಸರಗಳೂ ಫಲವತ್ತಾಗಿವೆ. ಫಲ ಆಯತಾಕಾರವಾಗಿ 7-10 ಸೆಂ.ಮೀ. ಉದ್ದ ಇದೆ. ಅದರ ಮೇಲೆ ನಾಲ್ಕಾರು ಏಣುಗಳಿವೆ. ಏಣುಗಳು ಚೂಪಾಗಿಲ್ಲ.

ಅವರೋಹದ 2 ಪ್ರಭೇದಗಳೂ ಸ್ವಲ್ಪ ಹೆಚ್ಚು ಕಡಿಮೆ ಒಂದೇ ರೀತಿ ಕಾಣುವುದರಿಂದ ಒಂದನ್ನೊಂದು ಗುರುತಿಸುವುದು ಕಷ್ಟ. ಆದರೆ ಅವರೋಹ ಕರಂಬೋಲದಲ್ಲಿ ಫಲದ ಮೂಲೆಯಂಚುಗಳು ಅಷ್ಟು ಸ್ಪಷ್ಟವಾಗಿಲ್ಲ. ಅದನ್ನು ಹಸಿಯಾಗಿಯೇ ಸೇವಿಸಲು ಅತ್ಯಂತ ಹುಳಿಯಾಗಿರುತ್ತದೆ. ಫಲ ಸ್ವಲ್ಪ ಉದ್ದುದ್ದವಾಗಿದ್ದು ಕೈಯಿಂದ ಸುಲಭವಾಗಿ ಜಾರುವಂತಿರುತ್ತದೆ. ಇದನ್ನು ವಿಶೇಷವಾಗಿ ಉಪ್ಪಿನಕಾಯಿಗಾಗಿಯೇ ಬಳಸುವುದುಂಟು.
ಫಲ ಬಿಡದಿದ್ದಾಗ ಕಮರಾಕ್ಷಿ ಮರವನ್ನು ಕಿರು ನೆಲ್ಲಿಮರವೆಂದು ತಪ್ಪಾಗಿ ಭಾವಿಸಬಹುದು. ಏಕೆಂದರೆ ಮೇಲುನೋಟಕ್ಕೆ ಎರಡೂ ಒಂದೇ ರೀತಿಯವಾಗಿ ಕಾಣುತ್ತದೆ. ಆದರೆ ಅವರೋಹದಲ್ಲಿ ಕಿರುಎಲೆಗಳು ಎದುರುಬದರಾಗಿದ್ದರೆ ಕಿರುನೆಲ್ಲಿಯಲ್ಲಿ ಕಿರುಎಲೆಗಳು ಸ್ಪಷ್ಟವಾಗಿ ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಈ ವ್ಯತ್ಯಾಸದಿಂದ ಅವೆರಡು ಮರಗಳನ್ನು ಗುರುತಿಸಿ ಪ್ರತ್ಯೇಕಿಸಬಹುದು.                      (ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ